Sunday, January 27, 2013


ಸಿರಿಮಲ್ಲಿಗೆಯ ಕಂಪು...


ನಾನು ಇತ್ತೀಚಿಗೆ ಕಂಡ ಸಿನಿಮಾ " ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚಟ್ಟು" ಕನ್ನಡದಲ್ಲಿ
ಹೇಳಬೇಕಂದರೆ ಸೀತೆಯ ಮನೆಯ ಹೊಸ್ತಿಲಲ್ಲಿ ಸಿರಿಮಲ್ಲಿಗೆಯ ಗಿಡ  ಅಂತ ಹೇಳಬಹುದು. ತೆಲುಗು ಚಿತ್ರರಂಗದ ಮಟ್ಟಿಗೆ ಇದು ಹೊಸ ಪ್ರಯೋಗ. ಯಾವಾಗಲೂ ಸ್ಟಾರ್ ನಟರನ್ನು ಹಾಕಿಕೊಂಡು ಅವರ ಕೈಯಲ್ಲಿ ನರಕೇಸ್ತಾ, ಚಂಪೇಸ್ತಾ, ರಚ್ಚ ರಚ್ಚ ಅನ್ನೋ ಡೈಲಾಗ್ ಹೊಡೆಸಿ ಪರೋಕ್ಷವಾಗಿ ಹಿಂಸೆಯನ್ನು ಸಮರ್ಥಿಸುವ ಸಿನಿಮಾಗಳ ಮಧ್ಯೆ ಇದು ವಿಭಿನ್ನವಾದದ್ದು. ಹಾಗಂತ ತೆಲುಗಿನಲ್ಲಿ ಸದಭಿರುಚಿಯ ಸಿನಿಮಾಗಳು ಇಲ್ಲವೆಂದಲ್ಲ. ಹ್ಯಾಪಿ ಡೇಸ್, ಬೊಮ್ಮರಿಲ್ಲು, ಗೋದಾವರಿ, ಆನಂದ್, ಆವ್ ಕಾಯಿ ಬಿರಿಯಾನಿ ಗಳಂತ ಸಿನಿಮಾಗಳಿದ್ದರೂ ಅವು ತುಂಬಾ ಅಪರೂಪ.

 ಈ ಚಿತ್ರದ ವಿಶೇಷ ಏನಪ್ಪ ಅಂದ್ರೆ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಮಾಡಿರುವುದು ಅದು ತಮ್ಮ ಇಮೇಜನ್ನು ಬದಿಗಿಟ್ಟು. ಪೋಕಿರಿ, ಅತಡು, ದೂಕುಡು ಗಳಂತಹ ಆಕ್ಷ್ಯನ್ ಸಿನಿಮಾ ಮಾಡಿ ಗೆದ್ದ ಮಹೇಶ್ ಬಾಬು ಇಲ್ಲಿ ನಗು ನಗುತ ಇರುವ, ತಮಾಷೆ ಮಾಡುವ ಹುಡುಗನ ಪಾತ್ರದಲ್ಲಿ ಮಿಂಚಿದ್ದಾರೆ. ಬಹುತೇಕ ನಗಿಸೋ ಪಾತ್ರಗಳನ್ನ ಮಾಡಿದ ವೆಂಕಟೇಶ್ ಈ ಸಿನಿಮಾದುದ್ದಕ್ಕೂ ಗುರ್ ಗುರ್ ಅಂತಲೇ ಇರುವ ಕೋಪಿಷ್ಟ, ತನ್ನ ಭಾವನೆಗಳನ್ನು ಹೇಳಿಕೊಳ್ಳದೆ ಒಳಗೆ ಕೊರಗುವ ಪಾತ್ರ ವೆಂಕಟೇಶ್ ಗೆ ಸೂಟ್ ಆಗಲ್ಲ. ಸಿನಿಮಾ ಕಥೆ ಈಗಾಗಲೇ ಎಲ್ಲರಿಗೂ ಗೊತ್ತಿದೆ, ಆದರೂ ಇನ್ನೊಮ್ಮೆ ಹೇಳಿಬಿಡುವೆ. 

ಒಂದೂರಿನಲ್ಲಿ ಒಬ್ಬ ಗೃಹಸ್ಥ(ಪ್ರಕಾಶ್ ರೈ) ಅವನಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ಮಗಳಂತೆ ಇರುವ ತಂಗಿಯ ಮಗಳು ಮತ್ತು ಮನೆಗೊಂದು ಹಿರಿಯ ಜೀವ (ಅಜ್ಜಿ). ಎಲ್ಲರಿಗೂ ಒಳ್ಳೆಯದನ್ನೇ ಬಯಸುವ, ಒಳ್ಳೆಯ ಮಾತನಾಡುವ, ಎಲ್ಲವನ್ನು ನಗು ನಗುತ್ತಲೇ ಎದುರಿಸುವ ಮನುಷ್ಯ, ದುಡ್ಡಿಲ್ಲದಿದ್ದರೂ ಊರ ಜನರ ಅಭಿಮಾನವನ್ನು ಗಳಿಸಿಕೊಂಡಿರುವಾತ. ಸರಳತೆ, ಸ್ವಾಭಿಮಾನ, ಪ್ರಾಮಾಣಿಕತೆ ಈ ಕುಟುಂಬದ ಉಸಿರು. ಈ ಕುಟುಂಬದ ಮಕ್ಕಳೇ ಪೆದ್ದೊಡು( ವೆಂಕಟೇಶ್), ಚಿನ್ನೋಡು (ಮಹೇಶ್ ಬಾಬು). ಪೆದ್ದೊಡುದು  ಸಿಡುಕು ಸ್ವಭಾವವಾದ್ರೆ, ಚಿನ್ನೋಡುದು ತುಡುಗು ಸ್ವಭಾವ. ಇಂತಿಪ್ಪ ಕುಟುಂಬವನ್ನ ದ್ವೇಷಿಸುವನೊಬ್ಬನಿದ್ದಾನೆ ಅವನಿಗೆ ದುಡ್ಡೇ ಮುಖ್ಯ, ದುಡ್ಡು ಮಾಡಿಲ್ಲದ ಪ್ರಕಾಶ್ ರೈ ಕುಟುಂಬ ಅವನ ದೃಷ್ಠಿಯಲ್ಲಿ ಮನುಷ್ಯರೇ ಅಲ್ಲ, ಇಂತಹವನ ಮಗಳು ಚಿನ್ನೋಡುವನ್ನು ಪ್ರೀತಿಸುತ್ತಾಳೆ. ಇದನ್ನ ತಿಳಿದ ಪೆದ್ದೋಡುಗೆ ಚಿನ್ನೋಡು ಮೇಲೆ ಅಸಮಾಧಾನ. ಕೊನೆಗೆ ಹೇಗೋ ದುಡ್ಡಿರುವ  ಆ ಮನುಷ್ಯನಿಗೆ ಜ್ಞಾನೋದಯವಾಗಿ ಸಿನಿಮಾ ಶುಭಂ ಆಗುತ್ತದೆ.

 ಆದರೆ ಈ ಚಿತ್ರದ ವಿಶೇಷ ಇರುವುದು ಚಿತ್ರದಲ್ಲಿ ಅತಿಯಾದ ಭಾವುಕತೆ ಇಲ್ಲ. ಅಣ್ಣ- ತಮ್ಮಂದಿರ ಕಥೆಯನ್ನ ಅತ್ಯಂತ ಸಹಜವಾಗಿ ಹೇಳಿರುವುದು, ಹಾಗಾಗಿಯೇ ಇರಬಹುದು ಸಿನಿಮಾ ಕೆಲವೊಂದು ಕಡೆ ಬೋರ್ ಹೊಡೆಸುತ್ತದೆ. ಕೆಲವೊಂದು ಸನ್ನಿವೇಶಗಳು ಪುನರಾವರ್ತನೆಯಾಗಿದೆ. ಬಹುಮುಖ್ಯ ಸಂಗತಿ ಏನೆಂದರೆ ಪ್ರಸ್ತುತ ಸಮಾಜದಲ್ಲಿ ನಾವು ಕಾಣುತ್ತಿರುವ ಉಳ್ಳವರ ಮತ್ತು ಇಲ್ಲದವರು ನಡುವಿನ ಕಂದಕವನ್ನು ಸಿನಿಮಾ ತೋರಿಸಲು ಪ್ರಯತ್ನಿಸಿರುವುದು ಮತ್ತು ಕೊನೆಯಲ್ಲಿ ಒಳ್ಳೆಯತನದಿಂದಲೇ ಎಲ್ಲವೂ ಸರಿಹೋಗುತ್ತದೆ ಎನ್ನುವುದು ಸಿನಿಮಾದಲ್ಲಷ್ಟೆ ಸಾಧ್ಯ ವಾಸ್ತವದಲ್ಲಲ್ಲ. ಹಾಡುಗಳು ಇಂಪಾಗಿವೆ,(ಮಿಕ್ಕಿ ಜೆ ಮೇಯರ್) ಹೊಸ ಕಥೆಯನ್ನು ಆಯ್ದು ಕೊಂಡ ನಿರ್ದೇಶಕರ ಮತ್ತು ನಿರ್ಮಾಪಕರ ಧೈರ್ಯವನ್ನು ಮೆಚ್ಚಬೇಕು. ಎಂಥ ಪಾತ್ರ ಕೊಟ್ಟರು ಸಮರ್ಥವಾಗಿ ಮಾಡಬಲ್ಲ ಪ್ರಕಾಶ್ ರೈ ಇಲ್ಲೂ ಗೆದ್ದಿದ್ದಾರೆ, ಹೊಸ ಮುಖದ ಅಂಜಲಿ ಕಣ್ಣಿನಲ್ಲೇ ಭಾವನೆಗಳನ್ನು ವ್ಯಕ್ತಪಡಿಸೊ ಶಕ್ತಿ ಇರುವಾಕೆ. ನಿರೂಪಣೆಯಲ್ಲಿ ಚುರುಕಾಗಿದ್ದಿದ್ದರೆ  ಸಿನಿಮಾ ಇನ್ನಷ್ಟು ಚೆನ್ನಾಗಿರೋದು  ಅಂತ ಅನಿಸದಿರದು. ಒಟ್ಟಿನಲ್ಲಿ ಇದಂತೂ ಸದಭಿರುಚಿಯ ಚಿತ್ರ,ನೀವು ನೋಡಿ ಆನಂದಿಸಿ.


3 comments:

  1. yaako film name tumba udda aaithu...yaaradru weekend yaav picchar nodide andre isdudda hesru heLakke kasta aagutte ;-)

    anyways film review was good...bore aaglilla..
    heege nodid picchardella review bareetiru...naanu odtha irtheeni :-)

    ReplyDelete
  2. ತುಂಬಾ ಚೆನ್ನಾಗಿದೆ ರಶ್ಮಿ

    ReplyDelete